ಈ ಮಾರ್ಗದರ್ಶಿ ನಿಮಗೆ ಹೇಗೆ ಸಹಾಯ ಮಾಡುತ್ತದೆ?
ಅಂತರ-ಧಾರ್ಮಿಕ ವಿವಾಹಗಳ ಕುರಿತಾದ ನ್ಯಾಯ ಮಾರ್ಗದರ್ಶಿ ನೀವು ಅಂತರ್-ಧಾರ್ಮಿಕ ನಾಗರಿಕ ವಿವಾಹಕ್ಕೆ ಪ್ರವೇಶಿಸಲು ಬಯಸಿದರೆ ಒಳಗೊಂಡಿರುವ ಪ್ರಕ್ರಿಯೆಯನ್ನು ವಿವರಿಸುತ್ತದೆ. 1954 ರ ವಿಶೇಷ ವಿವಾಹ ಕಾಯ್ದೆಯಡಿ ಬೇರೆ ಬೇರೆ ಧರ್ಮಕ್ಕೆ ಸೇರಿದ ಇಬ್ಬರು ಬೇರೆ ಧರ್ಮಕ್ಕೆ ಮತಾಂತರಗೊಳ್ಳದೆ ಮದುವೆಯಾಗಬಹುದು. ಈ ಮಾರ್ಗದರ್ಶಿ ಅಂತರ್-ಧಾರ್ಮಿಕ (ವಿಶೇಷ) ವಿವಾಹಕ್ಕೆ ಸಂಬಂಧಿಸಿದ ಕಾನೂನು ಮತ್ತು ಕಾರ್ಯವಿಧಾನದ ಅಂಶಗಳನ್ನು (ವಿವಾಹದ ಸೂಚನೆ ನೀಡುವುದು, ಮದುವೆಯನ್ನು ನಿರ್ವಹಿಸುವುದು, ವಿವಾಹ ಪ್ರಮಾಣಪತ್ರವನ್ನು ಪಡೆಯುವುದು, ಇತ್ಯಾದಿ) ಸಂಕ್ಷಿಪ್ತವಾಗಿ ವಿವರಿಸುತ್ತದೆ.
ಈ ಮಾರ್ಗದರ್ಶಿಯಲ್ಲಿ ಚರ್ಚಿಸಲಾಗುತ್ತಿರುವ ಕಾನೂನುಗಳು ಯಾವುವು?
ಅಂತರ-ಧಾರ್ಮಿಕ ವಿವಾಹಗಳ ಕುರಿತಾದ ನ್ಯಾಯ ಮಾರ್ಗದರ್ಶಿ 1954 ರ ವಿಶೇಷ ವಿವಾಹ ಕಾಯ್ದೆಯ ಬಗ್ಗೆ ವಿವರಿಸುತ್ತದೆ. ಈ ಮಾರ್ಗದರ್ಶಿ ವಿಶೇಷ ವಿವಾಹ ಕಾಯ್ದೆಯ ಆಧಾರದ ಮೇಲೆ ಸಾಮಾನ್ಯ ಕಾನೂನನ್ನು ಮಾತ್ರ ಒಳಗೊಂಡಿದೆ, ನಿಮ್ಮ ಪರಿಸ್ಥಿತಿಗೆ ಸೂಕ್ತವಾದ ಹೆಚ್ಚು ವಿವರವಾದ ಮಾಹಿತಿಗಾಗಿ ನೀವು ರಾಜ್ಯ-ನಿರ್ದಿಷ್ಟ ವಿಶೇಷ ವಿವಾಹ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲೇಖಿಸಬೇಕಾಗಬಹುದು.
ಕಾರ್ಯವಿಧಾನದ ಮಾಹಿತಿ
ಅರ್ಜಿ ಹಾಕುವ ಮೊದಲು ನೆನಪಿಡುವ ವಿಷಯಗಳು
ವಿಶೇಷ ವಿವಾಹ ಕಾನೂನಿನಡಿಯಲ್ಲಿ ಯಾರು ಮದುವೆಯಾಗಬಹುದು?
ಯಾವುದೇ ಇಬ್ಬರು ಜನರು ಕೆಲವು ಷರತ್ತುಗಳನ್ನು ಪೂರೈಸಿ, 1 ಧರ್ಮವನ್ನು ಲೆಕ್ಕಿಸದೆ, ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಬಹುದು. ಆದಾಗ್ಯೂ, ಈ ಕಾಯಿದೆಯು ಪುರುಷ ಮತ್ತು ಮಹಿಳೆಯ ನಡುವಿನ ಮದುವೆಯನ್ನು ಮಾತ್ರ ಪರಿಗಣಿಸುತ್ತದೆ ಮತ್ತು ಸಲಿಂಗ ದಂಪತಿಗಳು ಮತ್ತು ಮಂಗಳಮುಖಿ ಜನರನ್ನು ಒಳಗೊಳ್ಳಲು ತನ್ನ ವ್ಯಾಪ್ತಿಯನ್ನು ಇನ್ನೂ ವಿಸ್ತರಿಸಿಲ್ಲ.
ಇತ್ತೀಚೆಗೆ, ದೆಹಲಿ ಹೈಕೋರ್ಟ್ ಒಂದು ಅರ್ಜಿಯನ್ನು ಕೈಗೆತ್ತಿಕೊಂಡಿದ್ದು, ಒಬ್ಬ ವ್ಯಕ್ತಿಯ ಲಿಂಗವನ್ನು ಲೆಕ್ಕಿಸದೆ ವಿಶೇಷ ದಂಪತಿ ಕಾಯ್ದೆ ಎಲ್ಲಾ ದಂಪತಿಗಳಿಗೆ ಅನ್ವಯಿಸಬೇಕು ಎಂದು ಆ ಅರ್ಜಿ ಕೋರಿದೆ.ಎಲ್.ಜಿ.ಬಿ.ಟಿ. ಸಮುದಾಯದ ಸದಸ್ಯರು ಮತ್ತು ಕಾರ್ಯಕರ್ತರಾದ ಅಭಿಜಿತ್ ಅಯ್ಯರ್ ಮಿತ್ರ, ಗೋಪಿಶಂಕರ್ ಎಂ., ಗೀತಿ ಥಡಾನಿ ಮತ್ತು ಜಿ. ಊರ್ವಸಿ ಈ ಅರ್ಜಿಯನ್ನು ಸಲ್ಲಿಸಿದವರು. ಅರ್ಜಿಗೆ ಪ್ರತ್ಯುತ್ತರ ನೀಡಲು ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಕೇಳಿದೆ. ಈ ಕುರಿತು ಸುದ್ದಿಗಾಗಿ ನ್ಯಾಯಾ ಡೈಲಿ ಅನುಸರಿಸಿ.
ವಿಶೇಷ ವಿವಾಹ ಕಾನೂನಿನಡಿಯಲ್ಲಿ ಮದುವೆಯಾಗಲು ಯಾರು ಅರ್ಹರು?
ಈ ಕಾನೂನಿನಡಿಯಲ್ಲಿ ನೀವು ಮದುವೆಯಾಗಲು ಬಯಸಿದರೆ, ಮದುವೆಯ ಸಮಯದಲ್ಲಿ:
- ಪ್ರಸ್ತುತ ಜೀವಂತವಾಗಿರುವ ಇನ್ನೊಬ್ಬ ವ್ಯಕ್ತಿಯೊಂದಿಗೆ ನೀವು ಮದುವೆಯಾಗಿರಬಾರದು.
- ಬುದ್ಧಿಭ್ರಮಣೆಯ ಕಾರಣದಿಂದ ವಿವಾಹಕ್ಕೆ ವಿಧಿಬದ್ಧ ಒಪ್ಪಿಗೆ ಕೊಡಲು ಅಸಮರ್ಥರಾಗಿರಬಾರದು.
- ವಿವಾಹ ಮಾಡಿಕೊಳ್ಳಲು ಅಥವಾ ಸಂತಾನೋತ್ಪತ್ತಿ ಮಾಡಲು ಅಸಮರ್ಥರನ್ನಾಗಿ ಮಾಡಿರುವಂತಹ ಮಾನಸಿಕ ವ್ಯಾಧಿಯಿಂದ ನರಳುತ್ತಿರಕೂಡದು.
- ಪುರುಷರು ಕನಿಷ್ಟ 21 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು ಮತ್ತು ಸ್ತ್ರೀಯರು ಕನಿಷ್ಟ 18 ವರ್ಷ ವಯೋಮಾನದವರಾಗಿರಬೇಕು.
- ನಿಷೇಧಿತ ತಲೆಮಾರುಗಳಿಗೆ ಸೇರಿದವರಾಗಿರಬಾರದು. ಉದಾಹರಣೆಗೆ, ನಿಮ್ಮ ಸ್ವಂತ ಸಹೋದರ, ಸಹೋದರಿ, ಚಿಕ್ಕಮ್ಮ ಇತ್ಯಾದಿಗಳನ್ನು ನೀವು ಮದುವೆಯಾಗಲು ಸಾಧ್ಯವಿಲ್ಲ. ನಿಷೇಧಿತ ಸಂಬಂಧಗಳ ಪಟ್ಟಿಯನ್ನು ನೀವು ಇಲ್ಲಿ ನೋಡಬಹುದು. 2
ಅಂತರ–ಧಾರ್ಮಿಕ (ವಿಶೇಷ) ವಿವಾಹವನ್ನು ನೋಂದಾಯಿಸಲು ನೀವು ಎಲ್ಲಿಗೆ ಹೋಗ ಬೇಕು?
ವಿಶೇಷ ವಿವಾಹವನ್ನು ನೋಂದಾಯಿಸಲು, ನೀವು ಪ್ರತಿ ಜಿಲ್ಲೆಯಲ್ಲೂ ಕಂಡುಬರುವ ವಿವಾಹ ಅಧಿಕಾರಿ ಕಚೇರಿಗೆ ಹೋಗಬೇಕು.
ಅಂತರ-ಧಾರ್ಮಿಕ (ವಿಶೇಷ) ವಿವಾಹಕ್ಕೆ ಕ್ರಮಗಳು
ವಿವಾಹದ ಸೂಚನೆ / ನೋಟೀಸ್ ನೀಡುವುದು
ಈ ಕಾನೂನಿನ ಅಡಿಯಲ್ಲಿ ವಿವಾಹವನ್ನು ನೆರವೇರಿಸಬೇಕಿದ್ದಲ್ಲಿ, ವಿವಾಹ ಮಾಡಿಕೊಳ್ಳುವವರು ಸಂಬಂಧಿಸಿದ ಜಿಲ್ಲೆಯ ವಿವಾಹ ಅಧಿಕಾರಿಗೆ ಲಿಖಿತ ರೂಪದಲ್ಲಿ ನೋಟೀಸ್ ನೀಡತಕ್ಕದ್ದು.3 ಹೀಗೆ ನೋಟೀಸು ನೀಡುವ ಪಕ್ಷಗಾರರಲ್ಲಿ ಕನಿಷ್ಟ ಒಬ್ಬರಾದರೂ ನೋಟೀಸಿನ ದಿನಾಂಕದಿಂದ ಕನಿಷ್ಟ 30 ದಿನಗಳ ಹಿಂದೆ ಅಂತಹ ಜಿಲ್ಲೆಯಲ್ಲಿ ವಾಸಮಾಡಿರತಕ್ಕದ್ದು.
ಮದುವೆಯನ್ನು ನೋಂದಾಯಿಸಲು ನೀವು ದಾಖಲೆಗಳನ್ನು ಸಲ್ಲಿಸಬೇಕು. ಅಗತ್ಯವಿರುವ ದಾಖಲೆಗಳು ರಾಜ್ಯ / ಕೇಂದ್ರಾಡಳಿತ ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತವೆಯಾದರೂ, ನಿಮಗೆ ಅಗತ್ಯವಿರುವ ದಾಖಲೆಗಳ ಸಾಮಾನ್ಯ ಪಟ್ಟಿ ಇಲ್ಲಿದೆ:
ಮದುವೆ ನೋಂದಣಿಗಾಗಿ ದಾಖಲೆಗಳ ಪಟ್ಟಿ
- ಸಹಿ ಮಾಡಿದ ಮದುವೆ ಅರ್ಜಿ ನಮೂನೆಯ ಬಹು ಪ್ರತಿಗಳು
- ವಯಸ್ಸಿನ ಪುರಾವೆ (ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಇತ್ಯಾದಿ)
- ವಿಳಾಸ ಪುರಾವೆ (ರೇಷನ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಇತ್ಯಾದಿ)
- ಫೋಟೋ ಗುರುತಿನ ಪುರಾವೆ (ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಇತ್ಯಾದಿ)
- ವಧು ಮತ್ತು ವರನ ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳು
ವಿವಾಹ ಅಧಿಕಾರಿಗೆ ನೋಟಿಸ್ ನೀಡಿದ ದಿನಾಂಕದಿಂದ ಮೂರು ತಿಂಗಳೊಳಗೆ ಮದುವೆಯನ್ನು ನಡೆಸಬೇಕು, ಅಥವಾ ನೋಟಿಸ್ ಅಮಾನ್ಯವಾಗುತ್ತದೆ. ಅದರ ನಂತರ, ನೀವು ಹೊಸ ನೋಟಿಸ್ ನೀಡುವವರೆಗೂ ಯಾವುದೇ ವಿವಾಹ ಅಧಿಕಾರಿ ಮದುವೆಯನ್ನು ನಡೆಸುವುದಿಲ್ಲ.4
ನೋಟೀಸು/ ಸೂಚನೆಯಪ್ರಕಟಣೆ
ವಿವಾಹ ಅಧಿಕಾರಿಯು ಅಂತಹ ನೋಟೀಸುಗಳನ್ನು ಕಛೇರಿಯ ದಾಖಲೆಯಲ್ಲಿ ಸಂಗ್ರಹಿಸಿಡುತ್ತಾರೆ ಮತ್ತು ಅಂತಹ ನೋಟೀಸುಗಳ ದೃಢೀಕೃತ ಪ್ರತಿಯೊಂದನ್ನು ‘ವಿವಾಹ ನೋಟೀಸ್ ಪುಸ್ತಕ’ದಲ್ಲಿಡಲಾಗುತ್ತದೆ. ಈ ಪುಸ್ತಕವನ್ನು ಯಾವುದೇ ವ್ಯಕ್ತಿಯು ಉಚಿತವಾಗಿ ಪರೀಕ್ಷಿಸಲು ಅವಕಾಶವಿದೆ.5 ವಿವಾಹ ಅಧಿಕಾರಿಯು ಅಂತಹ ನೋಟೀಸಿನ ಪ್ರತಿಯನ್ನು ತನ್ನ ಕಛೇರಿಯಲ್ಲಿ ಸಾರ್ವಜನಿಕರ ಗಮನ ಸೆಳೆಯುವ ಸ್ಥಳದಲ್ಲಿ ಪ್ರಕಟಿಸುತ್ತಾರೆ.6
ವಿವಾಹ ಮಾಡಿಕೊಳ್ಳುತ್ತಿರುವ ಇಬ್ಬರಲ್ಲಿ, ಯಾರೂ ಕೂಡ ವಿವಾಹ ಅಧಿಕಾರಿ ಕಛೇರಿಯ ಜಿಲ್ಲೆಯಲ್ಲಿ ಶಾಶ್ವತವಾಗಿ ವಾಸವಾಗಿಲ್ಲದ ಪ್ರಕರಣಗಳಲ್ಲಿ, ಅವರು ಯಾವ ಜಿಲ್ಲೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೋ ಆ ಜಿಲ್ಲೆಯ ವಿವಾಹ ಅಧಿಕಾರಿಗೆ ವಿವಾಹದ ನೋಟಿಸಿನ ಪ್ರತಿಯೊಂದನ್ನುಕಳುಹಿಸುತ್ತಾರೆ. ಆ ಅಧಿಕಾರಿಯು ನೋಟೀಸನ್ನು ತನ್ನ ಕಛೇರಿಯಲ್ಲಿ ಸಾರ್ವಜನಿಕರ ಗಮನ ಸೆಳೆಯುವ ಸ್ಥಳದಲ್ಲಿ ಪ್ರಕಟಿಸುತ್ತಾರೆ.7
ಮದುವೆಗೆ ಆಕ್ಷೇಪಣೆ
ತಮ್ಮ ವಿವಾಹವನ್ನು ನೋಂದಣಿ ಮಾಡಬೇಕೆಂದು ವಿವಾಹ ಮಾಡಿಕೊಳ್ಳುವವರು ಸಹಿ ಮಾಡಿರುವ ಅರ್ಜಿಯನ್ನು ಸ್ವೀಕರಿಸಿದ ನಂತರ, ವಿವಾಹ ಅಧಿಕಾರಿಯು ಸಾರ್ವಜನಿಕ ಪ್ರಕಟಣೆಯನ್ನು ನೀಡುತ್ತಾರೆ. ವಿಶೇಷ ವಿವಾಹ ಕಾಯ್ದೆಯಡಿ ಮಾನ್ಯ ಮದುವೆಗೆ ಯಾವುದೇ ಷರತ್ತುಗಳನ್ನು ಈ ಮದುವೆ ಉಲ್ಲಂಘಿಸಿದರೆ, ಆಕ್ಷೇಪಣೆ ಸಲ್ಲಿಸಲು ಮೂವತ್ತು ದಿನಗಳ ಗಡುವು ನೀಡಿ,8 ಆ ಸಮಯದಲ್ಲಿ ಯಾವುದಾದರೂ ಆಕ್ಷೇಪಣೆಗಳು ಬಂದಲ್ಲಿ ಅವುಗಳನ್ನು ಪರಿಗಣಿಸುತ್ತಾರೆ.
ಆಕ್ಷೇಪಣೆ ಮತ್ತು ವಿಚಾರಣೆಒಬ್ಬ ವ್ಯಕ್ತಿಯು ಆಕ್ಷೇಪಣೆ ಮಾಡಿದರೆ, ವಿವಾಹ ಅಧಿಕಾರಿ ಆಕ್ಷೇಪಣೆಯನ್ನು ಮದುವೆ ನೋಟಿಸ್ ಪುಸ್ತಕದಲ್ಲಿ ದಾಖಲಿಸುತ್ತಾರೆ ಮತ್ತು ಅದನ್ನು ಓದಿ ಆಕ್ಷೇಪಣೆ ಮಾಡಿದ ವ್ಯಕ್ತಿಗೆ ವಿವರಿಸುತ್ತಾರೆ. ಆಕ್ಷೇಪಿಸುವ ವ್ಯಕ್ತಿ ಅಥವಾ ಅವರ ಪರವಾಗಿ ಯಾರಾದರೂ ದಾಖಲೆಗೆ ಸಹಿ ಹಾಕಬೇಕು.9
ಯಾವುದೇ ವ್ಯಕ್ತಿಯು ಆಕ್ಷೇಪಣೆ ಸಲ್ಲಿಸಿದ್ದರೆ, ಆಕ್ಷೇಪಣೆಯನ್ನು ವಿಚಾರಿಸುವವರೆಗೆ ಮತ್ತು ವಿವಾಹವನ್ನು ನಡೆಸಬಹುದು ಮತ್ತು ನೋಂದಾಯಿಸಬಹುದು ಎಂದು ಮನವರಿಕೆಯಾಗುವವರೆಗೂ ಮದುವೆ ಅಧಿಕಾರಿ ಮದುವೆಯನ್ನು ನಿರ್ವಹಿಸುವುದಿಲ್ಲ. ಆಕ್ಷೇಪಣೆ ಸಲ್ಲಿಸಿದ ಮೂವತ್ತು ದಿನಗಳಲ್ಲಿ ಅಧಿಕಾರಿ ವಿಚಾರಣೆ ನಡೆಸಿ, ತಮ್ಮ ನಿರ್ಧಾರ ತೆಗೆದುಕೊಳ್ಳಬೇಕು.10
ಆಕ್ಷೇಪಣೆಯನ್ನು ವಿಚಾರಿಸುವಾಗ, ವಿವಾಹ ಅಧಿಕಾರಿಯು ಸಾಕ್ಷಿಯನ್ನು ಕರೆಸಲು ಮತ್ತು ಪರೀಕ್ಷಿಸಲು, ದಾಖಲೆಗಳನ್ನು ಕೇಳಲು, ಇತ್ಯಾದಿ, ಸಿವಿಲ್ ನ್ಯಾಯಾಲಯದಂತಹ ನ್ಯಾಯಾಂಗ ಅಧಿಕಾರವನ್ನು ಹೊಂದಿರುತ್ತಾರೆ. ಅಗತ್ಯವಿರುವ ಸಾಕ್ಷ್ಯಗಳನ್ನು ನೀಡಲು ಅಧಿಕಾರಿ ಜಿಲ್ಲೆಯ ಯಾವುದೇ ವ್ಯಕ್ತಿಯನ್ನು ಕರೆಸಿಕೊಳ್ಳಬಹುದು.11
ಆಕ್ಷೇಪಣೆ ಅಸಮಂಜಸವೆಂದು ಅಧಿಕಾರಿ ನಂಬಿದರೆ, ಅವರು ಆಕ್ಷೇಪಿಸಿದ ವ್ಯಕ್ತಿಯ ಮೇಲೆ ಒಂದು ಸಾವಿರ ರೂಪಾಯಿಗಳವರೆಗೆ ಪರಿಹಾರ ವೆಚ್ಚವನ್ನು ವಿಧಿಸಬಹುದು ಮತ್ತು ಮದುವೆಯಾಗುವ ದಂಪತಿಗೆ ಪರಿಹಾರ ಹಣವನ್ನು ನೀಡಬಹುದು.12
ಆಕ್ಷೇಪಣೆಯನ್ನು ಎತ್ತಿಹಿಡಿಯುವುದು
ವಿವಾಹ ಅಧಿಕಾರಿ ಆಕ್ಷೇಪಣೆಯನ್ನು ಎತ್ತಿಹಿಡಿದರೆ ಮತ್ತು ಮದುವೆ ಮಾಡಲು ನಿರಾಕರಿಸಿದರೆ, ನೀವು ಸಂಬಂಧಪಟ್ಟ ಜಿಲ್ಲಾ ನ್ಯಾಯಾಲಯಕ್ಕೆ, ಅಂದರೆ, ವಿವಾಹ ಅಧಿಕಾರಿ ತಮ್ಮ ಕಚೇರಿಯನ್ನು ಹೊಂದಿರುವ ಜಿಲ್ಲೆಯಲ್ಲಿ ನ್ಯಾಯಾಂಗ ಅಧಿಕಾರವನ್ನು ಹೊಂದಿರುವ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು. ಅಧಿಕಾರಿ ನಿರಾಕರಿಸಿದ ಮೂವತ್ತು ದಿನಗಳಲ್ಲಿ ನೀವು ಮೇಲ್ಮನವಿ ಸಲ್ಲಿಸಬೇಕು. ಮೇಲ್ಮನವಿಯ ಕುರಿತು ಜಿಲ್ಲಾ ನ್ಯಾಯಾಲಯ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದು, ನ್ಯಾಯಾಲಯದ ತೀರ್ಪನ್ನು ಅಧಿಕಾರಿ ಪಾಲಿಸಬೇಕಾಗುತ್ತದೆ.13
ನ್ಯಾಯಾಲಯದ ತೀರ್ಪಿನ ಮೂರು ತಿಂಗಳೊಳಗೆ ಮದುವೆಯನ್ನು ನಿರ್ವಹಿಸದಿದ್ದರೆ, ಮದುವೆ ಸೂಚನೆ ಅಮಾನ್ಯವಾಗುತ್ತದೆ. ಯಾವುದೇ ವಿವಾಹ ಅಧಿಕಾರಿ ಮದುವೆಯನ್ನು ನಡೆಸುವುದಿಲ್ಲ, ಮತ್ತು ನೀವು ಹೊಸ ನೋಟೀಸ್ ನೀಡಬೇಕಾಗುತ್ತದೆ.4
ಎತ್ತಿಹಿಡಿಯಲಾದ ಆಕ್ಷೇಪಣೆಗಳ ಉದಾಹರಣೆಗಳು:
- ವಧುವಿನ ವಯಸ್ಸು ಹದಿನೆಂಟು ವರ್ಷಕ್ಕಿಂತ ಕಡಿಮೆ
- ಮದುಮಗನಿಗೆ ಈಗಾಗಲೇ ಮದುವೆಯಾಗಿದೆ
ಮದುವೆಯನ್ನು ನಿರ್ವಹಿಸುವುದು
ವಿವಾಹ ನೆರವೇರುವುದಕ್ಕೆ ಮುನ್ನ ವಿವಾಹ ಅಧಿಕಾರಿಗಳ ಸಮ್ಮುಖದಲ್ಲಿ ಮೂವರು ಸಾಕ್ಷಿಗಳು ಘೋಷಣಾ ಪತ್ರವೊಂದಕ್ಕೆ14 ರುಜು ಮಾಡತಕ್ಕದ್ದು. ವಿವಾಹ ಅಧಿಕಾರಿಗಳೂ ಕೂಡ ಈ ಘೋಷಣಾ ಪತ್ರಕ್ಕೆ ಸಹಿಹಾಕುತ್ತಾರೆ. ನೀವು ವಿವಾಹ ಅಧಿಕಾರಿಯ ಕಚೇರಿಯಲ್ಲಿ ಮದುವೆಯನ್ನು ಮಾಡಬಹುದು. ಕಚೇರಿಯಿಂದ ಸಮಂಜಸವಾದ ಅಂತರದಲ್ಲಿ ಬೇರೆ ಯಾವುದೇ ಸ್ಥಳದಲ್ಲಿ ಮದುವೆಯಾಗಲು ಸಹ ನೀವು ಆಯ್ಕೆ ಮಾಡಬಹುದು. ಆದಾಗ್ಯೂ, ಇದಕ್ಕಾಗಿ, ನೀವು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.15
ನೀವು ಅನುಸರಿಸಲು ಬಯಸುವ ಯಾವುದೇ ವಿಧಾನ ಅಥವಾ ಧಾರ್ಮಿಕ ಆಚರಣೆಯ ಪ್ರಕಾರ ನೀವು ಮದುವೆಯನ್ನು ನಡೆಸಬಹುದು. ಉದಾಹರಣೆಗೆ, ಇದು ಹಿಂದೂ ಧಾರ್ಮಿಕ ಸಮಾರಂಭವಾಗಬಹುದು, ಅಥವಾ ಚರ್ಚ್‌ನಲ್ಲಿನ ವಿವಾಹವಾಗಬಹುದು.
ವಿವಾಹ ಹೇಗೆ ನೆರವೇರಬೇಕೆಂಬುದನ್ನು ತೀರ್ಮಾನಿಸುವ ಹಕ್ಕು ನಿಮಗಿದೆಯಾದರೂ, ನೀವು ವಿವಾಹ ಅಧಿಕಾರಿ ಮತ್ತು ಮೂವರು ಸಾಕ್ಷಿಗಳ ಸಮ್ಮುಖದಲ್ಲಿ ಈ ಕೆಳಕಂಡ ವಾಕ್ಯಗಳನ್ನು ಪರಸ್ಪರ ಹೇಳತಕ್ಕದ್ದು: “ನಾನು (ನಿಮ್ಮಹೆಸರು) ನಿಮ್ಮನ್ನು (ನಿಮ್ಮ ಜೊತೆಗಾರ/ಜೊತೆಗಾರ್ತಿಯ ಹೆಸರು) ನನ್ನ ಕಾನೂನುಬದ್ಧ ಗಂಡ/ಹೆಂಡತಿ ಎಂದು ಸ್ವೀಕರಿಸುತ್ತೇನೆ”.
ನೀವು ಅರ್ಥಮಾಡಿಕೊಳ್ಳುವ ಯಾವುದೇ ಭಾಷೆಯಲ್ಲಿ ಈ ಹೇಳಿಕೆಯನ್ನು ನೀಡಬಹುದು.16
ವಿವಾಹ ಪ್ರಮಾಣಪತ್ರ
ವಿವಾಹ ನೆರವೇರಿದ ನಂತರ ವಿವಾಹ ಅಧಿಕಾರಿಯು ವಿವಾಹ ಪ್ರಮಾಣಪತ್ರ ಪುಸ್ತಕದಲ್ಲಿ ಪ್ರಮಾಣಪತ್ರವನ್ನು17 ನಮೂದಿಸುತ್ತಾರೆ.
ವಿವಾಹ ಅಧಿಕಾರಿಯು ವಿವಾಹ ಪ್ರಮಾಣಪತ್ರ ಪುಸ್ತಕದಲ್ಲಿ ಪ್ರಮಾಣಪತ್ರವನ್ನು ನಮೂದಿಸಿದ ನಂತರ, ಪ್ರಮಾಣಪತ್ರಕ್ಕೆ ವಿವಾಹ ಮಾಡಿಕೊಳ್ಳುತ್ತಿರುವವರು ಮತ್ತು ಮೂವರು ಸಾಕ್ಷಿಗಳು ರುಜುಮಾಡುತ್ತಾರೆ.18 ಶಾಸನಬದ್ಧವಾಗಿ ವಿವಾಹವು ಜರುಗಿದೆ ಮತ್ತು ಸಾಕ್ಷಿಗಳ ಸಹಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಸಮರ್ಪಕ ನಿಯಮಗಳನ್ನು ಪಾಲಿಸಲಾಗಿದೆ ಎಂಬುದಕ್ಕೆ ಈ ಪ್ರಮಾಣಪತ್ರವು ಪ್ರಶ್ನಾತೀತ ಸಾಕ್ಷ್ಯಾಧಾರ.ವಿವಾಹ ಪ್ರಮಾಣಪತ್ರವು ವಿಶೇಷ ವಿವಾಹ ಕಾಯ್ದೆ, 1954 ರ ಅಡಿಯಲ್ಲಿ ವಿವಾಹದ ಕಾನೂನು ಪುರಾವೆಯಾಗಿದೆ. ಇದು ವಿವಾಹವು ಮಾನ್ಯವಾಗಿದೆ ಮತ್ತು ಕಾನೂನಿನಡಿಯಲ್ಲಿ ಎಲ್ಲಾ ವಿಧಿವಿಧಾನಗಳೊಂದಿಗೆ ಪೂರ್ಣಗೊಂಡಿದೆ ಎಂದು ಖಚಿತಪಡಿಸುತ್ತದೆ.19
- 1 ಸೆಕ್ಷನ್ 4, ವಿಶೇಷ ವಿವಾಹ ಕಾಯ್ದೆ, 1954.[↩]
- 1 ಮೊದಲ ಷೆಡ್ಯೂಲ್, ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 5 ಮತ್ತು ಎರಡನೇ ಷೆಡ್ಯೂಲ್, ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 14, ವಿಶೇಷ ವಿವಾಹ ಕಾಯ್ದೆ, 1954.[↩][↩]
- ಸೆಕ್ಷನ್ 6(1), ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 6(2), ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 6(3), ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 7(1), ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 7(3), ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 8(1), ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 9(1), ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 9(2), ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 8(2), ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 11, ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 12(1), ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 12(2), ವಿಶೇಷ ವಿವಾಹ ಕಾಯ್ದೆ, 1954.[↩]
- ನಾಲ್ಕನೇ ಷೆಡ್ಯೂಲ್, ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 13(1), ವಿಶೇಷ ವಿವಾಹ ಕಾಯ್ದೆ, 1954.[↩]
- ಸೆಕ್ಷನ್ 13(2), ವಿಶೇಷ ವಿವಾಹ ಕಾಯ್ದೆ, 1954.[↩]
Leave a Comment